ತಲೆಬರಹಗಳು

Tuesday, January 31, 2017

ಪದಾರ್ಥಚಿಂತೆ

ಪದದರ್ಥಚಿಂತನೆಗಳೆಂದು ಬೊಬ್ಬಿಡುತಿಹರು
ಪದನಿಲ್ಲದಲೆ ನೂರ ಗಳಹುತಿಹರು
ಪದದ ಪದನರಸುತಲಿ ಬೇರ ತಡಕುತಲಿರಲು
ಗದಗುಟ್ಟಿ ಹೋಗುವರು ಚಾರುವಾಕ

Monday, June 15, 2015

ಕೇಶವನೆ ಗುರಿ

ನೀರಿಗಾಕರ ನೂರು ಪಾತ್ರಗಳು ಹಲವಾರು
ಭೋರಿಡುವ ಸಾಗರವದೊಂದೆ ಗಮ್ಯ
ನೂರು ದೈವದ ನಮನ ಸೇರುವುದು ಕೇಶವನ
ಸಾರುವುದು ಋಷಿವಾಣಿ ಚಾರುವಾಕ

Thursday, February 27, 2014

ಅಸ್ತಮಿಪ ಸೂರ್ಯ...

ಶಸ್ತ್ರದೊಳೊ ಶಾಸ್ತ್ರದೊಳೊ ಕಾಷಾಯವಸ್ತ್ರದೊಳೊ
ವಿಸ್ತರದ ಸಾಮ್ರಾಜ್ಯ ರಾಜಕಾರ್ಯದೊಳೋ
ಎತ್ತರವು ಶಾಶ್ವತವೆ ಮುಳುಗೇಳುತಿಹ ಬದುಕಿ
ದಸ್ತಮಿಪ ಸೂರ್ಯನೊಲು ಚಾರುವಾಕ

Sunday, January 9, 2011

ನೂರು ತೀವಿತ್ತು...

ಕಿರಿಯೊಳೊಂದಿಪ್ಪತ್ತು ಹರೆಯೊಳಿನ್ನಿಪ್ಪತ್ತು
ಹರಿದುದಿಪ್ಪತ್ತು ನೆರೆ ಕಿರಿಕಿರಿಗಳೊಳ್
ಜರೆಯೊಳಿಪ್ಪತ್ತು ನರೆ-ಮರೆವಿನೊಳಗಿಪ್ಪತ್ತು
ಸರಿದುದಲ್ಲಿಗೆ ನೂರು ಚಾರುವಾಕ

Thursday, November 18, 2010

ದ್ವಾ ಸುಪರ್ಣಾ

ಪಕ್ಷಿಯುಗಳವದೊಂದು ಮರನನಾಶ್ರಯಿಸಿಹುದು
ಭಕ್ಷಿಸುವುದೊಂದು ಪಿಕ ಫಲದಿನಿಗಳ
ಈಕ್ಷಿಸುವುದಾದರದೊಳಿನ್ನೊಂದು ಕಾಣಿದುವೆ
ಲಕ್ಷ್ಯ ಜೀವಕು ಪರಕು ಚಾರುವಾಕ

Saturday, August 28, 2010

ಅದ್ವೈತ ದರ್ಶನ

ಸ್ಪರ್ಷಗಳ ಗಂಧಗಳ ರಸ ರೂಪ ನಾದಗಳ
ಹರ್ಷ ದುಃಖಾದ್ಯಖಿಳ ಭಾವದ ಉಪಾಧಿಗಳ
ದರ್ಶನಾರೋಧಗಳ ತೊಡೆಯಲುಳಿಯುವ ನಿಜದ
ದರ್ಶನವೆ ಅದ್ವೈತ ಚಾರುವಾಕ

Friday, August 13, 2010

ಭೇದಾಭೇದ

ಭೇದವೆಂಬರು ಕೆಲರಭೇದವೆಂಬರು ಹಲರು
ಭೇದದಿನಭೇದವೆಂಬುವರಿತರರು
ಭೇದದೊಳ್ ಬಾಧಿಸುವ ವಾದದೊಳ್ ಭೇದಿಸುವ
ಭೇದಮೂರುತಿ ಯಾರೊ ಚಾರುವಾಕ